ಶಿಕಾರಿಪುರ, ಮೇ.08 : ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವಕನೊಬ್ಬ ಮಾಲೀಕರು ತಮ್ಮ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಹಣ ಕಳ್ಳತನ ಮಾಡಿ ಪರಾರಿಯಾಗಿದ್ದು, ಆತನ ಸುಳಿವು ಸಿಗದ ಹಿನ್ನೆಲೆ ಅಂಗಡಿ ಮಾಲೀಕ ದೂರು ನೀಡಿದ್ದಾರೆ.
ಮೇ 2 ರಂದು ಮಧ್ಯಾಹ್ನದ ಅಡುಗೆ ಮಾಡುವಂತೆ ಸೂಚಿಸಿ ಸೆಯನ್ ಸಿಂಗ್ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಂದ್ರ ಎಂಬಾತನಿಗೆ ಮನೆ ಬೀಗ ಕೊಟ್ಟು ಕಳುಹಿಸಿದ್ದರು. ಸಂಜೆ 4 ಗಂಟೆಯಾದರೂ ಮಹೇಂದ್ರ ಅಂಗಡಿಗೆ ಹಿಂತಿರುಗಿರಲಿಲ್ಲ. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಸೆಯನ್ ಸಿಂಗ್ ಮನೆ ಬಳಿ ಪರಿಶೀಲಿಸಿದಾಗ ಬೀಗ ಹಾಕಲಾಗಿತ್ತು.
ಮನೆ ಬೀಗ ಒಡೆದು ಸೆಯನ್ ಸಿಂಗ್ ಒಳಗೆ ಹೋಗಿ ಪರಿಶೀಲಿಸಿದಾಗ ಕೊಠಡಿಯೊಳಗೆ ಡಬ್ಬಿಯಲ್ಲಿ ಇಟ್ಟಿದ್ದ 11 ಲಕ್ಷ ರೂ. ಹಣ ನಾಪತ್ತೆಯಾಗಿತ್ತು. ಹಣದೊಂದಿಗೆ ಮಹೇಂದ್ರ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಾಜಸ್ಥಾನಕ್ಕೆ ಕರೆ ಮಾಡಿದಾಗಲು ಆತನ ಸುಳಿವು ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ