ಗಣಿ, ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ, ಜೀವನಿಂದನೆ, ದೂರು ದಾಖಲು

Kranti Deepa

 ಶಿವಮೊಗ್ಗ,ಫೆ.11 : ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಕೆ.ಕೆ.ಜ್ಯೋತಿಯವರಿಗೆ ಅಕ್ರಮ ಮರಳು ದರೋಡೆ ದಾಳಿಯ ವೇಳೆ ತೀರಾ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ವಾಹನ ಮೈಮೇಲೆ ಹತ್ತಿಸುವ ಜೀವ ಬೆದರಿಕೆ ಹಾಕಿದ್ದ ಹಿನ್ನಲೆಯಲ್ಲಿ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ದೊಡ್ಡ ಚರ್ಚೆಗೆ ಒಳಗಾಗಿದ್ದ ಜ್ಯೋತಿ ನಿಂದನಾ ಪ್ರಕರಣ ಈಗ ಕಾನೂನಾತ್ಮಕ ರೂಪ ಪಡೆದಿದ್ದು,ಮಂಗಳವಾರ ಕೆಲವರ ವಿರುದ್ಧ ದೂರು ದಾಖಲಾಗಿದೆ. ಭದ್ರಾವತಿಯ ಸೀಗೆಬಾಗಿ ಬಾಬಳ್ಳಿ ಬಳಿಯಲ್ಲಿ ಭದ್ರಾನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಗಣಿ ಅಧಿಕಾರಿ ಜ್ಯೋತಿಯವರಿಗೆ ಸಿಕ್ಕಿತ್ತು.

ಈ ಸಂದರ್ಭದಲ್ಲಿ ರಾತ್ರಿಯಾಗಿರುವುದನ್ನೂ ಲೆಕ್ಕಿಸದೇ ಗಣಿ ಅಧಿಕಾರಿಗಳಾದ ಕೆ ಕೆ ಜ್ಯೋತಿ, ಪ್ರಿಯಾ ದೊಡ್ಡಗೌಡರ್ ಮತ್ತಿತರೆ ಮೂವರು ಸಿಬ್ಬಂದಿಗಳು ದಾಳಿ ಮಾಡಲು ಸ್ಥಳಕ್ಕೆ ಹೋಗಿದ್ದರು ಸ್ಥಳದಲ್ಲಿದ್ದ ಅಕ್ರಮ ಮರಳುಕೋರ ದಂಧೆಯವನು ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಅಧಿಕಾರಿ ಜ್ಯೋತಿಯವರಿಗೆ ಫೋನ್ ನೀಡಲು ಬರುತ್ತಾನೆ.

ಫೋನ್‌ನಲ್ಲೇ ತೀರಾ ಕೊಳಕು ಭಾಷೆಯಲ್ಲಿ ಬೈಯಲು ಆರಂಭಿಸಿದ ಆಕಡೆ ವ್ಯಕ್ತಿ ಜೀವ ಬೆದರಿಕೆಯನ್ನೂ ಹಾಕುತ್ತಾನೆ. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಧಿಕಾರಿ ಜ್ಯೋತಿಯವರು ಕೂಡ ಘಟನೆ ನಡೆದಿದೆಯೋ ಇಲ್ಲವೋ ಎಂಬುದನ್ನೂ ಹೇಳದೇ ಮೌನವಹಿಸಿದ್ದರು. ಇದೀಗ ಲಿಖಿತ ದೂರು ನೀಡಿದ್ದು, ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
";