ಬೆಂಗಳೂರು, ಆ.25 : ಟೆಲಿಕಾಂ ದಿಗ್ಗಜ ಏರ್‌ಟೆಲ್ ಭಾನುವಾರ ತನ್ನ ಸೇವೆಯಲ್ಲಿ ಅಡಚಣೆಯನ್ನು ಎದುರಿಸಿತು. ಇದರಿಂದಾಗಿ ರಾಜ್ಯದಾದ್ಯಂತ ಸಾವಿರಾರು ಗ್ರಾಹಕರು ಆರು ಗಂಟೆಗಳ ಕಾಲ ಕರೆಗಳನ್ನು ಮಾಡಲು ಅಥವಾ ಇಂಟರ್ನೆಟ್ ಬಳಸಲು ಸಾಧ್ಯವಾಗಲಿಲ್ಲ. ಈ ಕುರಿತು ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್ ಬಳಕೆದಾರರು ದೂರು ಸಲ್ಲಿಸಿದರು ಮತ್ತು ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಚಾರ ತಿಳಿಸಿದರು.
ಔಟೇಜ್ ಟ್ರ್ಯಾಕಿಂಗ್ ಪ್ಲಾಟ್‌ಫಾರ್ಮ್ ಡೌನ್‌ಡೆಕ್ಟರ್‌ನಲ್ಲಿ ಬೆಳಿಗ್ಗೆ 10.44 ರ ಸುಮಾರಿಗೆ ಪ್ರಾರಂಭವಾಗಿ ಮಧ್ಯಾಹ್ನ 12.15 ರ ಹೊತ್ತಿಗೆ ಅನೇಕ ದೂರುಗಳು ದಾಖಲಾಗಿವೆ. 7,100ಕ್ಕೂ ಹೆಚ್ಚು ಬಳಕೆದಾರರು ಕನೆಕ್ಟಿವಿಟಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ದುರ್ಬಲ ಸಿಗ್ನಲ್ ಮತ್ತು ಕೆಲವು ಸ್ಥಳಗಳಲ್ಲಿ ಸಂಪೂರ್ಣ ಬ್ಲಾಕೌಟ್ ಆಗಿರುವ ಕುರಿತು ಬಳಕೆದಾರರು ವರದಿ ಮಾಡಿದ್ದಾರೆ. ಇದು ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಕಂಪನಿಯ ಎರಡನೇ ಪ್ರಮುಖ ಸೇವಾ ವೈಫಲ್ಯವಾಗಿದೆ. ಆಗಸ್ಟ್ 19 ರಂದು, ದೆಹಲಿಯಲ್ಲಿ 3,500ಕ್ಕೂ ಹೆಚ್ಚು ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದರು.
ಬಳಕೆದಾರರಿಗೆ ಪ್ರತಿಕ್ರಿಯಿಸಿದ ಏರ್‌ಟೆಲ್, `ತಾತ್ಕಾಲಿಕ ಸಂಪರ್ಕ ಸಮಸ್ಯೆಗಳಿಂದ’ ಈ ಅಡಚಣೆ ಉಂಟಾಗಿದೆ ಮತ್ತು ಒಂದು ಗಂಟೆಯೊಳಗೆ ಸೇವೆಗಳನ್ನು ಪುನಃಸ್ಥಾಪಿಸಲಾಗುವುದು ಎಂದು ಭರವಸೆ ನೀಡಿತು. ಮಧ್ಯಾಹ್ನ 1 ಗಂಟೆಯ ನಂತರ ಸಮಸ್ಯೆಯು ಪರಿಹಾರವಾಗಲು ಪ್ರಾರಂಭಿಸಿತು. ಆದಾಗ್ಯೂ, ಸಂಜೆ 4 ಗಂಟೆಯ ಹೊತ್ತಿಗೆ, 150ಕ್ಕೂ ಹೆಚ್ಚು ಬಳಕೆದಾರರು ಇನ್ನೂ ಅಡಚಣೆ ಎದುರಿಸಿದರು.