ಶಿವಮೊಗ್ಗ,ಅ.23 : ಗೂಗಲ್‌ನಲ್ಲಿ ಯುನಿಯನ್ ಬ್ಯಾಂಕ್ ಮ್ಯಾನೇಜರ್ ನಂಬರ್ ಸರ್ಚ್ ಮಾಡಿ ಕರೆ ಮಾಡಿದ್ದ ಮಹಿಳೆಯ ಬ್ಯಾಂಕ್ ಖಾತೆಯಿಂದ ೯.೧೯ ಲಕ್ಷ ರೂ. ಕಣ್ಮರೆಯಾಗಿದೆ. ಶಿವಮೊಗ್ಗ ಶಿಕ್ಷಕಿಯೊಬ್ಬರು ಹಣ ಕಳೆದುಕೊಂಡು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬ್ಯಾಂಕಿಂಗ್ ವ್ಯವಹಾರ ಸಂಬಂಧ ಮಾಹಿತಿ ಪಡೆಯಲು ಶಿಕ್ಷಕಿಯೊಬ್ಬರು (ಹೆಸರು ಗೌಪ್ಯ) ಗೂಗಲ್‌ನಲ್ಲಿ ಯುನಿಯನ್ ಬ್ಯಾಂಕ್ ಮ್ಯಾನೇಜರ್ ಮೊಬೈಲ್ ನಂಬರ್ ಸರ್ಚ್ ಮಾಡಿದ್ದರು. ಅಲ್ಲಿ ದೊರೆತ ನಂಬರ್‌ಗೆ ಕರೆ ಮಾಡಿದಾಗ ವ್ಯಕ್ತಿಯೊಬ್ಬ ಮ್ಯಾನೇಜರ್ ಸೋಗಿನಲ್ಲಿ ಮಾತನಾಡಿದ್ದ. ಆತ ಸೂಚಿಸಿದ ಮೊಬೈಲ್ ಆಪ್ ಅನ್ನು ಶಿಕ್ಷಕಿ ಇನ್‌ಸ್ಟಾಲ್ ಮಾಡಿ ಕೊಂಡಿದ್ದರು. ಚೆಕ್ ಕ್ಲಿಯರೆನ್ಸ್ ಆಗಲು 24 ಗಂಟೆ ಸಮಯ ಬೇಕು ಎಂದು ಆತ ತಿಳಿಸಿದ್ದ.
11 ಬಾರಿ ಹಣ ವರ್ಗಾವಣೆ
ಮರು ದಿನ ಅದೇ ನಂಬರ್‌ಗೆ ಶಿಕ್ಷಕಿ ಕರೆ ಮಾಡಿದಾಗ ಇವತ್ತು ನಿಮ್ಮ ಚೆಕ್ ಕ್ಲಿಯರೆನ್ಸ್ ಆಗಲಿದೆ ಎಂದು ಮ್ಯಾನೇಜರ್ ಸೋಗಿನಲ್ಲಿದ್ದಾತ ತಿಳಿಸಿದ್ದ.
ಕೆಲವೇ ಹೊತ್ತಿನಲ್ಲಿ ಶಿಕ್ಷಕಿಯ ಬ್ಯಾಂಕ್ ಖಾತೆಯಿಂದ 11 ಬಾರಿ ಹಣ ವರ್ಗಾವಣೆಯಾಗಿತ್ತು. ಒಟ್ಟು 9.19 ಲಕ್ಷ ರೂ. ಹಣ ಬೇರೆಡೆಗೆ ವರ್ಗವಾಗಿತ್ತು.
ಮೋಸ ಹೋಗಿರುವುದು ಗೊತ್ತಾದ ಹಿನ್ನೆಲೆ ಶಿಕ್ಷಕಿ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.