ಚಿರತೆ ದಾಳಿ ಮಹಿಳೆಗೆ ಗಂಭೀರ ಗಾಯ

Kranti Deepa
ರಾಮನಗರ, ಜು. 30 : ಮಕ್ಕಳನ್ನು ಟ್ಯೂಷನ್ ನಿಂದ ಕರೆತರಲು ತೆರಳುತ್ತಿದ್ದ ಮಹಿಳೆಯೊಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ .
ತಾಲ್ಲೂಕಿನ ಪಾದರಹಳ್ಳಿ ಗ್ರಾಮದ ಮಾನಸ (38) ಚಿರತೆ ದಾಳಿಯಿಂದ ಗಂಭೀರ ಗಾಯಗೊಂಡ ಮಹಿಳೆಯಾಗಿದ್ದಾರೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಏಕಾಏಕಿ ಚಿರತೆ ದಾಳಿ ಮಾಡಿ ಮಹಿಳೆಯನ್ನು ಗಂಭೀರವಾಗಿ ಗಾಯಗೊಳಿಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ
ಘಟನೆಯ ವಿವರ :  ಮಂಗಳವಾರ ರಾತ್ರಿ 7-30ರ ವೇಳೆಗೆ ತಮ್ಮ ಮಕ್ಕಳನ್ನು ಟ್ಯೂಷನ್ ತರಗತಿಯಿಂದ ವಾಪಸ್ ಕರೆತರಲು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಪಾಲಬೋವಿದೊಡ್ಡಿ ನ್ಯಾಯಾಂಗ ಬಡಾವಣೆಯ ಬಳಿಯ ರಾಮನಗರ-ಮಾಗಡಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಇವರ ಮೇಲೆ ಹಠಾತ್ ಚಿರತೆ ದಾಳಿ ನಡೆಸಿದೆ. ಮಾನಸ ಅವರ ಬೆನ್ನು, ಹೊಟ್ಟೆ, ಪಕ್ಕೆಗಳ ಭಾಗದಲ್ಲಿ ಚಿರತೆ ಪರಚಿದ್ದು, ಗಂಭೀರ ಸ್ವರೂಪದ ಗಾಯವಾಗಿದೆ.
ಚಿರತೆಯಿಂದ ರಕ್ಷಿಸಿದ ಹೆಲ್ಮೆಟ್ : ಮಾನಸ ಅವರು ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ವೇಳೆ ತಲೆಗೆ ಹೆಲ್ಮೆಟ್ ಮತ್ತು ಜರ್ಕಿನ್ ಧರಿಸಿದ್ದರು. ಈ ಕಾರಣದಿಂದಾಗಿ ಅಚಾನಕ್ ಆಗಿ ಚಿರತೆ ನಡೆಸಿದರೂ  ಅವರು ಧರಿಸಿದ್ದ ಹೆಲ್ಮೆಟ್ ಮಾನಸರನ್ನ ರಕ್ಷಿಸಿತು. ದಾಳಿ ನಡೆಸಿದ ಚಿರತೆ ಅವರನ್ನು ಹೊತ್ತೊಯ್ಯುವ ಪ್ರಯತ್ನ ಪಟ್ಟಿದೆ. ಈ ವೇಳೆ ಕಂಗಾಲಾದ ಆಕೆ ರಕ್ಷಣೆಗಾಗಿ ಕೂಗಿಕೊಂಡಾಗ ಹಿಂದೆ ಬರುತ್ತಿದ್ದ ವಾಹನ ಸವಾರರ ಗಲಾಟೆ ಹಾಗೂ ಹಾರನ್ ಶಬ್ದಕ್ಕೆ ಬೆದರಿದ ಚಿರತೆ ಮಾನಸ ಅವರನ್ನು ರಸ್ತೆಯ ಪಕ್ಕದಲ್ಲಿಯೇ ಬಿಟ್ಟು ಹೆದರಿ ಕಾಡಿನತ್ತ ಪರಾರಿಯಾಗಿದೆ.
ಸ್ಥಳದಲ್ಲಿದ್ದ ಕೆಲವರು ಮಾನಸ ಅವರ ಪತಿ ಮೋಹನ್ ರಾಂ ಮನ್ನಾರ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರಲ್ಲದೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ರಾಮನಗರ ಆರ್ ಎಫ್ ಓ ಮನ್ಸೂರ್,  ಎಸಿಎಫ್ ಪುಟ್ಟಮ್ಮ ಭೇಟಿ ಮಾಡಿ ಪರಿಶೀಲನೆ ನಡೆಸಿದರಲ್ಲದೇ ಗಾಯಾಳು ಮಾನಸ ಅವರಿಂದ ಮಾಹಿತಿ ಪಡೆದರು.
ನಗರದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದೆ. ವಾಕಿಂಗ್ ತೆರಳುವ ನಾಗರಿಕರಿಗೆ ಚಿರತೆ ಪದೇ ಪದೇ ಕಾಣಿಸುತ್ತಿದೆ. ಇತ್ತೀಚೆಗೆ ಶಾಂತಿ ಲಾಲ್ ಲೇ ಔಟ್ ನಲ್ಲಿ ಚಿರತೆ ದಾಳಿ ಮಾಡಿ ಸಾಕು ನಾಯಿ ಬಲಿಯಾಗಿದೆ. ಕೂಡಲೇ ಅರಣ್ಯ ಇಲಾಖೆ, ರಾಯರದೊಡ್ಡಿ, ಜಿಗೇನಹಳ್ಳಿ, ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article
";