ಶಿವಮೊಗ್ಗ,ಜ. 17 : ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿರುವ ಯೂನಿಯನ್ ಬ್ಯಾಂಕ್ ನ ಎಟಿಎಂನಲ್ಲಿ ಅಪರಿಚಿತನಿಂದ ಹಣ ತೆಗೆಸಿಕೊಂಡ ವ್ಯಕ್ತಿಗೆ 55 ಸಾವಿರ ರೂ., ಮೋಸವಾದ ಘಟನೆ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಹುಣಸೆಕಟ್ಟೆಯ 65 ವರ್ಷದ ನಿವಾಸಿ ಪರಮೇಶ್ವರಪ್ಪ ತನ್ನ ಅಣ್ಣನಿಗೆ ಹುಷಾರಿಲ್ಲದ ಕಾರಣ ಡಿ.25 ರಂದು ಶಿವಮೊಗ್ಗ ಮಗ್ರಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿದ್ದರು.
ಮಾರನೇ ದಿನ ತನ್ನ ಅಣ್ಣನಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಆಕ್ಸಿಜನ್ ಮೆಷಿನ್ ಖರೀದಿಸಲು ಹಣ ಬೇಕಾಗಿದ್ದರಿಂದ ಪರಮೇಶ್ವರಪ್ಪ ಆಸ್ಪತ್ರೆಯ ಆವರಣದಲ್ಲಿರುವ ಯೂನಿಯನ್ ಬ್ಯಾಂಕ್ ನ ಎಟಿಎಂ ಗೆ ಸಂಜೆ ಹೋದ ವೇಳೆ ಹಣ ತೆಗೆಯಲು ಸಾಧ್ಯವಾಗಲಿಲ್ಲ. ಆಗ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿಗೆ ಹಣವನ್ನು ಡ್ರಾ ಮಾಡಿಕೊಡಲು ಪರಮೇಶ್ವರಪ್ಪ ಎಟಿಎಂ ಕಾರ್ಡ್ ಕೊಟ್ಟು ಪಿನ್ ಸಹ ಹೇಳಿದ್ದರು.
ಆ ವ್ಯಕ್ತಿಯು ಎಟಿಎಂ ಮೆಷಿನ್ ನಲ್ಲಿ ಎಟಿಎಂ ಕಾರ್ಡ್ ಹಾಕಿ 16,000 ರೂಗಳನ್ನು ಡ್ರಾ ಮಾಡಿಕೊಟ್ಟಿದ್ದನು. ಪರಮೇಶ್ವರಪ್ಪ ಕೈಗೆ ಹಣ ಕೊಟ್ಟು ಎಣಿಸಿಕೊಳ್ಳುವಂತೆ ಹೇಳಿ ಹೊರಗಡೆ ಹೋಗಿ ಉಗಿಯಲು ಹೋಗಿದ್ದನು,ನಂತರ ವಾಪಾಸ್ ಬಂದು ಪರಮೇಶ್ವರಪ್ಪ ಕೈಗೆ ಬೇರೆ ಬ್ಯಾಂಕಿನ ಎಟಿಎಂ ಕಾರ್ಡ ಕೊಟ್ಟಿದ್ದನು.
ಇದನ್ನು ಗಮನಿಸದೆ ಕಿಸೆಗೆ ಹಾಕಿಕೊಂಡು ಅವರು ಮರಳಿದ್ದರು. ಮಾರನೇ ದಿನ ಬೆಳಿಗ್ಗೆ ಊರಿಗೆ ಹೋದಾಗ, ಮಗನು ಬೋರ್ ಕೊರೆಸಲು ಲಾರಿಗೆ ಹಣ ಕಟ್ಟಬೇಕು ಹಣವನ್ನು ಡ್ರಾ ಮಾಡಿಕೊಂಡು ಬರಲು ಎಟಿಎಂ ಕಾರ್ಡ್ ಕೊಡುವಂತೆ ಕೇಳಿದ್ದರಿಂದ ಪರಮೇಶ್ವರಪ್ಪ ಎಟಿಎಂ ಕಾರ್ಡ್ ಕೊಟ್ಟಿದ್ದರು. ಅದನ್ನು ನೋಡಿದ ಮಗನು ಯೂನಿಯನ್ ಬ್ಯಾಂಕ್ ಕಾರ್ಡ್ ಕೊಟ್ಟಿದ್ದೀಯೆ.
ನಮ್ಮದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಡ್. ಅದನ್ನು ಅದನ್ನು ಎಟಿಎಂ ಕೊಡುವಂತೆ ಕೇಳಿದ್ದನು.
ತನ್ನಲ್ಲಿ ಇದೊಂದೇ ಕಾರ್ಡ್ ಇದೆ ಎಂದು ಹೇಳಿ ಪರಮೇಶ್ವರಪ್ಪ ಶಿವಮೊಗ್ಗದಲ್ಲಿ ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟು ಹಣವನ್ನು ಡ್ರಾ ಮಾಡಿಸಿದ ವಿಚಾರ ವಿವರಿಸಿದನು. ತನ್ನ ತಂದೆ ಮೋಸ ಹೋಗಿದ್ದನ್ನು ಅರಿತ ಮಗ ಕೂಡಲೇ ಹೊಸದುರ್ಗ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಹೋಗಿ ವಿಚಾರವನ್ನು ತಿಳಿಸಿ. ಎಟಿಎಂ ಕಾರ್ಡ್ ಬ್ಲಾಕ್ ಮಾಡಿಸಿದ್ದಾರೆ.
ಆದರೆ ಆ ವೇಳೆಗಾಗಲೇ ಬ್ಯಾಂಕ್ ಖಾತೆಯಲ್ಲಿರುವ 55,035 ರೂಗಳನ್ನು ಡ್ರಾ ಮಾಡಿರುವುದು ಕಂಡುಬಂದಿದೆ.ನಂತರ ಶಿವಮೊಗ್ಗಕ್ಕೆ ಬಂದು ಅಪರಿಚಿತ ವ್ಯಕ್ತಿಯ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.