ಶಿವಮೊಗ್ಗದ ಚಿನ್ನದ ವ್ಯಾಪಾರಿಗೆ ವಂಚನೆ : ಬೆಂಗಳೂರಿನಲ್ಲಿ ಕೇಸ್ ದಾಖಲು

Kranti Deepa

ಶಿವಮೊಗ್ಗ ,ಡಿ. 25: ಬೆಂಗಳೂರಿನ ಚಿನ್ನಾಭರಣ ವ್ಯಾಪಾರಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಮಾಜಿ ಸಚಿವರ ಗೆಳತಿ ಹಾಗೂ ಮಾಜಿ ಸಂಸದರ ಸಹೋದರಿ ಎಂದು ಹೇಳಿಕೊಂಡಿದ್ದ ಬೆಂಗಳೂರಿನ ಮಹಿಳೆಯೋರ್ವರ ಪ್ರಕರಣ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ಬೆನ್ನಲ್ಲೇ  ಸದರಿ ಮಹಿಳೆಯು, ಶಿವಮೊಗ್ಗ ನಗರದ ಚಿನ್ನಾಭರಣ ವ್ಯಾಪಾರಿಯೋರ್ವರಿಗೂ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಸಂಬಂಧ ವ್ಯಾಪಾರಿಯು ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ಶಿವಮೊಗ್ಗದ ಚಿನ್ನಾಭರಣ ವ್ಯಾಪಾರಿಯು ವ್ಯವಹಾರದ ನಿಮಿತ್ತ ಬೆಂಗಳೂರಿನ ನಗರ್ತಪೇಟೆಗೆ ತೆರಳಿದ್ದ ವೇಳೆ, ಆರೋಪಿತ ಮಹಿಳೆ ಪರಿಚಯವಾಗಿದೆ. ಆಪಾದಿತೆಯು ತನ್ನನ್ನು ಚಿನ್ನದ ವ್ಯಾಪಾರಿಯೆಂದು ಪರಿಚಯಿಸಿಕೊಂಡಿದ್ದಳು.

ಆಭರಣದ ವ್ಯವಹಾರ ಸಂಬಂಧ 278 ಗ್ರಾಂ ತೂಕದ ಚಿನ್ನಾಭರಣವನ್ನು ಶಿವಮೊಗ್ಗದ ವ್ಯಾಪಾರಿಯಿಂದ ಪಡೆದುಕೊಂಡಿದ್ದಳು. ಆದರೆ ಹಣ ನೀಡದೆ ವಂಚನೆ ಮಾಡಿದ್ದಳು ಎಂದು   ವ್ಯಾಪಾರಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಬೆಂಗಳೂರಿನ ಚಿನ್ನಾಭರಣ ವ್ಯಾಪಾರಿಗಳಿಗೆ ವಂಚನೆ ಎಸಗಿದ ಆರೋಪದ ಪ್ರಕರಣ ಬೆಳಕಿಗೆ ಬಂದ ನಂತರ, ಶಿವಮೊಗ್ಗದ ಚಿನ್ನಾಭರಣ ವ್ಯಾಪಾರಿಯು  ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

Share This Article
";