ಶಿವಮೊಗ್ಗ,ನ.30 :ನಗರದಲ್ಲಿ ಸುಸಜ್ಜಿತ ಕನಕ ಸಮುದಾಯ ಭವನ ನಿರ್ಮಾಣವಾಗಲಿದೆ. ಸುಮಾರು 7 ಕೋಟಿ ರೂ. ವೆಚ್ಚದ ಈ ಭವನಕ್ಕೆ ರಾಜ್ಯ ಸರಕಾರ ದಿಂದ 3.5 ಕೋಟಿ ರೂ. ನೀಡಲಾಗುವುದು. ತಾನು ಸಹ ವೈಯಕ್ತಿಕವಾಗಿ ನೆರವು ನೀಡುತ್ತೇನೆ ಎಂದು ನಗರಾಭಿವೃದ್ಧಿ ಸಚಿವ ಸುರೇಶ್ ಬೈರತಿ ಹೇಳಿದರು.
ಈಗಾಗಲೇ ಈ ಸಂಬಂಧ ಮುಖ್ಯಮಂತ್ರಿಗಳು ಕೂಡ ಒಪ್ಪಿದ್ದಾರೆ. ತಾನೂ ಸಹ ವೈಯಕ್ತಿಕವಾಗಿ ನೆರವು ನೀಡುತ್ತೇನೆ. ಎಲ್ಲರ ಸಹಾಯದಿಂದ ಸಮಾಜದ ದೇಣಿಗೆಯನ್ನು ಸೇರಿಸಿಕೊಂಡು ಒಂದು ಒಳ್ಳೆಯ ಸಮುದಾಯ ಭವನವನ್ನು 15 ತಿಂಗಳಲ್ಲಿ ನಿರ್ಮಿಸಬೇಕು. ಅದರ ಉದ್ಘಾಟನೆ ಯನ್ನು ಮುಖ್ಯಮಂತ್ರಿಯವರಿಂದಲೇ ನಡೆಸ ಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಇದೊಂದು ಪುಣ್ಯದ ಕೆಲಸವಾಗಿದೆ. ಈ ಹಿಂದೆ 5 ಕೋಟಿ ರೂ. ಅನುದಾನ ಆಗಿತ್ತು. ಕಾರಣಾಂತರದಿಂದ ಅದು ಬಿಡುಗಡೆಯಾಗಿಲ್ಲ. ಅದಕ್ಕಾಗಿ ಕ್ಷಮೆ ಕೇಳುವೆ. ಈಗ ಸಂಸದರ ಅನುದಾನದಿಂದ 50 ಲಕ್ಷ ರೂ. ಹಣವನ್ನು ನೀಡುತ್ತೇನೆ. ಸಮಾಜಕ್ಕೆ ವಿಶೇಷವಾದ ಗೌರವವಿದೆ. ಹಾಲಿನಂತ ಹಾಲು ಮತದವರದು ಹಾಲಿನ ಮನಸ್ಸು. ಎಲ್ಲರೂ ಸೇರಿ ಸಮುದಾಯ ಭವನ ನಿರ್ಮಿಸಬೇಕು. ತಾನು 50 ಲಕ್ಷ ರೂ ನೆರವನ್ನು ನೀಡುವುದಾಗಿ ಪ್ರಕಟಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಎನ್. ಚನ್ನಬಸಪ್ಪ, ಡಿಎಸ್ ಅರುಣ್, ಡಾ|| ಧನಂಜಯ ಸರ್ಜಿ, ಸೂಡಾ ಅಧ್ಯಕ ಹೆಚ್.ಎಸ್.ಸುಂದರೇಶ್, ಎಂ.ಶ್ರೀಕಾಂತ್, ಪರಿಷತ್ ಸದಸ್ಯೆ ಬಲ್ಕಿಷ್‌ಬಾನು, ಎಂಎಡಿಬಿ ಅಧ್ಯಕ್ಷ ಆರ್. ಎಂ.ಮಂಜುನಾಥಗೌಡ, ಕೆ.ಎಂ. ರಾಮಚಂದ್ರಪ್ಪ, ಎಂ.ವೀರಣ್ಣ, ಎಸ್ ಕೆ ಮರಿಯಪ್ಪ, ಕೆ. ರಂಗನಾಥ್, ನಗರದ ಮಹ ದೇವಪ್ಪ, ಶರತ್ ಮರಿಯಪ್ಪ ಮೊದಲಾದವರು ಹಾಜರಿದ್ದರು.
ಜಿಲ್ಲಾ ಉಸುವಾರಿ ಸಚಿವ ಮಧುಬಂಗಾರಪ್ಪ ಮಾತನಾಡಿ, ಸಚಿವ ಬೈರತಿ ಸುರೇಶ್ ಅವರು ಅನುದಾನವನ್ನು ಬಿಡುಗಡೆ ಮಾಡಿಸಿಕೊಟ್ಟಿದ್ದಾರೆ. ಆದ್ದರಿಂದ ಶೀಘ್ರ ಕಾಮಗಾರಿ ಆರಂಭವಾಗಿ ಮುಗಿಯಬೇಕು ಎಂದರು.
ಪ್ರ್ರಾಸ್ತಾವಿಕ ಮಾತನಾಡಿದ ಸಂಘದ ಪ್ರ. ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ಸರಕಾರ ಘೋಷಿಸಿರುವ ಹಣದಲ್ಲಿ ಈಗಾಗಲೇ 75 ಲಕ್ಷ ರೂ. ಬಿಡುಗಡೆ ಆಗಿದೆ. ಇನ್ನುಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.
ಶಾಸಕ ಎಸ್. ಎನ್. ಚನ್ನಬಸಪ್ಪ, ಡಿ ಎಸ್ ಅರುಣ್, ಡಾ ಧನಂಜಯ ಸರ್ಜಿ ಮಾತನಾಡಿ ತಾವು ಸಹ ದೇಣಿಗೆ ನೀಡುವುದಾಗಿ ಪ್ರಕಟಿಸಿದರು.
ಕುರುಬರ ಜಡೆದೇವರ ಮಠದ ಅಮೋಘ ಸಿದ್ದೇಶ್ವರಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪಾಲಿಕೆಗೆ 200 ಕೋಟಿ ರೂ. ಅನುದಾನ ಬಿಡುಗಡೆ
ಶಿವಮೊಗ್ಗ ಮಹಾನಗರ ಪಾಲಿಕೆಗೆ 200 ಕೋಟಿ ಅನುದಾನ ಕೊಟ್ಟಿದ್ದೇವೆ. ಸಿದ್ದರಾಮಯ್ಯ ಸರಕಾರದಲ್ಲಿ ಅನುದಾನ ಇಲ್ಲ. ಎಂಬುದು ಸುಮ್ಮನೆ ಅಪಪ್ರಚಾರವಷ್ಟೇ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ಶನಿವಾರ ಇಲ್ಲಿನ ಕುರುಬರ ಹಾಸ್ಟೆಲ್ ಆವರಣದಲ್ಲಿ ಕನಕದಾಸ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕ ಭಾಷಣದಲ್ಲಿ ಅವರು ಈ ವಿಷಯ ತಿಳಿಸಿದರು.
15 ದಿನದಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿಯಬೇಕು. ಆನಂತರ ಕೆಲಸ ಆರಂಭಿಸಬೇಕು. ಕಾಮಗಾರಿಗಳ ಶಿಲಾನ್ಯಾಸಕ್ಕೆ ತಾನೇ ಬರುತ್ತೇನೆ ಎಂದ ಅವರು,ಚುನಾವಣೆಯಲ್ಲಿ ಮಾತ್ರ ರಾಜಕಾರಣಿ ಗಳಿಗೆ ಪಕ್ಷ ಬೇಧವಿರುತ್ತದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡದೆ ಮುನ್ನಡೆಯಬೇಕು. ನಮ್ಮ ಸರ ಕಾರ ಜಾತಿ,ಧರ್ಮ ನೋಡದೆ ಎಲ್ಲರಿಗೂ ಐದು ಗ್ಯಾರಂಟಿಗಳನ್ನು ನೀಡಿದೆ. 59 ಸಾವಿರ ಕೋಟಿ.ರೂ. ಸಾಮಾನ್ಯ ಜನರಿಗೆ ಗ್ಯಾರಂಟಿಗಳ ಮೂಲಕ ತಲುಪುತ್ತಿದೆ. ಅಭಿವೃದ್ಧಿಗೆ ಹಣದ ಕೊರತೆ ಇಲ್ಲ ಎಂದು ಸುರೇಶ್ ಹೇಳಿದರು.
ಸೊರಬ ಪಟ್ಟಣದ ಅಭಿವೃದ್ಧಿಗೆ ೩೫೦ ಕೋಟಿ ರೂ.ನೆರವು ನೀಡಲಾಗಿದೆ. ನಮ್ಮ ಸರ್ಕಾರಕ್ಕೆ ಹಣಕಾಸಿನ ಕೊರತೆ ಇಲ್ಲ. ನಗರಾಭಿವೃದ್ಧಿ ಸಚಿವನಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇನೆ. ಸಿದ್ಧರಾಮಯ್ಯ ಅವರಂತಹ ಮುತ್ಸದ್ದಿಗಳ ಸಂಪುಟದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದೇ ಹೆಮ್ಮೆಯ ವಿಷಯ ಎಂದರು.