ಜನವರಿಯಿಂದ ಶಿವಮೊಗ್ಗಕ್ಕೆ 2 ವಂದೇ ಭಾರತ್ ರೈಲು ಒಂದು ತಿರುಪತಿಗೆ ಮತ್ತೊಂದು ಬೆಂಗಳೂರಿಗೆ ಸಂಚಾರ

Kranti Deepa

ಶಿವಮೊಗ್ಗ,ಜೂ.10: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ 2 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇರಿ ೭ ಹೊಸ ರೈಲುಗಳ ಸೇವೆ ಲಭ್ಯವಾಗಲಿವೆ. ಜತೆಗೆ ರಾಜ್ಯದ 4 ನೇ ರೈಲ್ವೆ ಕೋಚಿಂಗ್ ಡಿಪೋ ಕೂಡ ಆರಂಭವಾಗಲಿದೆ. ಈ ಬಗ್ಗೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಅವರು ಮಾಹಿತಿ ನೀಡಿದ್ದಾರೆ.

ನಗರ ಹೊರ ವಲಯದ ಕೋಟೆಗಂಗೂರಿನಲ್ಲಿ ರಾಜ್ಯದ 4 ನೇ ರೈಲ್ವೆ ಕೋಚಿಂಗ್ ಡಿಪೋ ಆರಂಭದೊಂದಿಗೆ ಶಿವಮೊಗ್ಗದಲ್ಲಿ ಹೊಸ ರೈಲ್ವೆ ಕ್ರಾಂತಿಗೆ ನಾಂದಿ ಹಾಡಲಿದೆ. ಬೆಂಗಳೂರು ಮತ್ತು ಮೈಸೂರು ರೈಲ್ವೆ ಮೇಲಿನ ಒತ್ತಡ ಕಡಿಮೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದ್ದು, ಅದಕ್ಕಾಗಿ ಬಹಳಷ್ಟು ರೈಲುಗಳು ಬೆಂಗಳೂರು ಮತ್ತು ಮೈಸೂರು ಬದಲಾಗಿ ಶಿವಮೊಗ್ಗದಿಂದ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ.

2026 ಜನವರಿಗೆ ರೈಲ್ವೆ ಕೋಚಿಂಗ್ ಡಿಪೋ ಆರಂಭ:
ರೈಲ್ವೆ ಕೋಚಿಂಗ್ ಡಿಪೋ 2026 ನೇ ಜನವರಿ ಅಂತ್ಯದೊಳಗೆ ಆರಂಭವಾಗಲಿದೆ. ಅದರ ಜತೆಗೆ ಎರಡು ವಂದೇ ಭಾರತ್ ರೈಲುಗಳು ಶಿವಮೊಗ್ಗದಿಂದ ಸಂಚಾರ ಆರಂಭಿಸುತ್ತವೆ. ಈಗಾಗಲೆ ಎರಡೂ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಹಾಗೂ ಗಾಡಿ ಸಂಖ್ಯೆಯನ್ನೂ ಇಲಾಖೆ ಪ್ರಕಟಿಸಿದೆ. ಶಿವಮೊಗ್ಗ ತಿರುಪತಿ ವಂದೇ ಭಾರತ್ ರೈಲು ಮುಂಜಾನೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.30 ಕ್ಕೆ ತಿರುಪತಿ ತಲುಪುತ್ತದೆ. ಮತ್ತೆ ಸಂಜೆ 4.30 ಕ್ಕೆ ಹೊರಟು ರಾತ್ರಿ 12.30 ಗಂಟೆಗೆ ಶಿವಮೊಗ್ಗ ತಲುಪುತ್ತದೆ. ಮತ್ತೊಂದು ವಂದೇ ಭಾರತ್ ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿದೆ.

ಶಿವಮೊಗ್ಗದಿಂದ ಇತರೆ ರಾಜ್ಯಕ್ಕೆ ಹೊಸ ರೈಲುಗಳು:
ಶಿವಮೊಗ್ಗ ಎರ್ನಾಕುಲಂ(ಕೇರಳ), ಶಿವಮೊಗ್ಗ ಭಾಗಲ್‌ಪುರ್(ಬಿಹಾರ), ಶಿವಮೊಗ್ಗ ಜಮ್‌ಶೆಡ್‌ಪುರ್(ಜಾರ್ಖಂಡ್), ಶಿವಮೊಗ್ಗ- ಚಂಡೀಘಢ, ಶಿವಮೊಗ- ಗೌಹಾಟಿ ರೈಲುಗಳ ಸಂಚಾರ ಜನವರಿ ಮತ್ತು ಫೆಬ್ರವರಿಯಲ್ಲಿ ಆರಂಭಿಸಲು ಇಲಾಖೆ ನಿರ್ಧರಿಸಿದೆ ಎಂದರು.

ಹೊಸ ರೈಲು ಮಾರ್ಗಗಳ ಸರ್ವೇ ಆರಂಭ:
ಮತ್ತೊಂದು ಕಡೆ ತಾಳಗುಪ್ಪದಿಂದ ಹುಬ್ಬಳ್ಳಿ ಸಂಪರ್ಕಕ್ಕೆ ಸಿದ್ದಾಪುರ, ಶಿರಸಿ, ಮುಂಡಗೋಡು ತಡಸ ನಡುವೆ 150 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಆಗಿದೆ. ಈ ಮಾರ್ಗದಲ್ಲಿ 195 ಹೆಕ್ಟೆರ್ ಖುಷ್ಕಿ ಭೂಮಿ, 317 ಹೆಕ್ಟೆರ್ ನೀರಾವರಿ, 190 ಹೆಕ್ಟೆರ್ ಅರಣ್ಯ ಭೂಮಿ ಬರುತ್ತದೆ. ಅರಣ್ಯ ಭೂಮಿಗೆ ಬದಲಿ ಭೂಮಿ ಕೊಡುವ ಕಾರ್ಯ ಆರಂಭವಾಗಿದೆ. ತಾಳಗುಪ್ಪ- ಹೊನ್ನಾವರ ರೈಲು ಮಾರ್ಗದ ಸರ್ವೆ ಸಹ ಆಗಿದೆ. ಇಲ್ಲಿ ಶೇ.73 ರಷ್ಟು ಅರಣ್ಯ ಬರುವುದರಿಂದ ಸರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ಚಿಕ್ಕಮಗಳೂರು -ಬೇಲೂರು -ಹಾಸನ ನೂತನ ಮಾರ್ಗಕ್ಕೆ ಸರ್ವೆ ಆರಂಭವಾಗಿದೆ. ಬೀರೂರು -ಶಿವಮೊಗ್ಗ ಡಬ್ಲಿಂಗ್‌ಗೆ 1900 ಕೋಟಿ ರೂ. ಅನುಮೋದನೆ ನೀಡಲಾಗಿದ್ದು ಈ ವರ್ಷಾಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಭದ್ರಾವತಿ -ಚಿಕ್ಕಜಾಜೂರು ನಡುವೆ 73 ಕಿ.ಮೀ. ರೈಲು ಮಾರ್ಗ ಸರ್ವೆಗೆ ಟೆಂಡರ್ ಆಗಿದೆ. ಇದು ವಿಐಎಸ್‌ಎಲ್‌ಗೆ ಅದಿರು ಸಾಗಿಸಲು ಅನುಕೂಲವಾಗುತ್ತದೆ ಎಂದರು.

ಶಿವಮೊಗ್ಗದಿಂದ ಹೊಸ ರೈಲುಗಳು

1) ಶಿವಮೊಗ್ಗ- ತಿರುಪತಿ(ವಂದೇ ಭಾರತ್)
2 ) ಶಿವಮೊಗ್ಗ- ಬೆಂಗಳೂರು(ವಂದೇ ಭಾರತ್)
3 ) ಶಿವಮೊಗ್ಗ- ಎರ್ನಾಕುಲಂ(ಕೇರಳ)
4 ) ಶಿವಮೊಗ್ಗ- ಬಗಲ್‌ಪುರ್(ಬಿಹಾರ)
5 ) ಶಿವಮೊಗ್ಗ- ಜಮ್‌ಶೆಡ್‌ಪುರ್(ಜಾರ್ಖಂಡ್)
6 ) ಶಿವಮೊಗ್ಗ- ಚಂಡೀಗಢ(ಪಂಜಾಬ್)
7 ) ಶಿವಮೊಗ್ಗ- ಗೌಹಾಟಿ(ಅಸ್ಸಾಂ)

Share This Article
";