ಸಾಗರ , ಜು. 24 : ಲಾರಿ ಹಾಗೂ ಕೆಎಸ್‌ಆರ್’ಟಿಸಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ, ಬಸ್ ನಲ್ಲಿದ್ದ ಸುಮಾರು ೧೨ ಪ್ರಯಾಣಿಕರು ಗಾಯಗೊಂಡ ಘಟನೆ ಜುಲೈ 24 ರ ಬೆಳಿಗ್ಗೆ ಸಾಗರ ತಾಲೂಕಿನ ಆನಂದಪುರ ಬಳಿಯ ಮುಂಬಾಳು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಗಾಯಾಳುಗಳನ್ನು ಸಾಗರ ಉಪ ವಿಭಾಗೀಯ ಆಸ್ಪತ್ರೆ, ಆನಂದಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಕೆಲ ಪ್ರಯಾಣಿಕರನ್ನು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿತ್ತು. ಹೆದ್ದಾರಿಯ ಇಕ್ಕೆಲದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
‘ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್ ಸಾಗರದಿಂದ ಶಿವಮೊಗ್ಗದೆಡೆಗೆ ಆಗಮಿಸುತ್ತಿತ್ತು. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಕೆಎಸ್‌ಆರ್’ಟಿಸಿ ಅಧಿಕಾರಿ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಿಗೆ ಅಗತ್ಯ ನೆರವಿನಹಸ್ತ ಚಾಚಿದ್ದಾರೆ’ ಎಂದು ಕೆಎಸ್‌ಆರ್’ಟಿಸಿ ಶಿವಮೊಗ್ಗ ವಿಭಾಗದ ಜಿಲ್ಲಾ ಅಧಿಕಾರಿ ನವೀನ್ ಟಿ ಆರ್ ಮಾಹಿತಿ ನೀಡಿದ್ದಾರೆ.