ಭೀಕರ ರಸ್ತೆ ಅಪಘಾತ : 11 ಮಂದಿ ಸಾವು

Kranti Deepa
ಯಲ್ಲಾಪುರ,ಜ.22: ಲಾರಿ ಪಲ್ಟಿಯಾಗಿ 11 ಮಂದಿ ಸಾವನ್ನಪ್ಪಿರುವ ದುರ್ಘಟನೆಯೊಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಬಳಿ ಬುಧವಾರ ನಡೆದಿದೆ.
ಕುಮಟಾದಲ್ಲಿ ಸಂತೆ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಹಣ್ಣು ಹಾಗೂ ತರಕಾರಿ ಹೊತ್ತು ಲಾರಿಯಲ್ಲಿ ಬರುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಸವಣೂರು ತಾಲೂಕಿನ 28 ವ್ಯಾಪಾರಿಗಳು ಲಾರಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಗುಳ್ಳಾಪುರದ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದ್ದು, ಪರಿಣಾಮ 10  ಮಂದಿ ವ್ಯಾಪಾರಿಗಳು ಸ್ಥಳದಲ್ಲಿಯೇ ದುರ್ಮರಣ ವನ್ನಪ್ಪಿದ್ದಾರೆ. ಅಲ್ಲದೆ, 18 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಮತ್ತಷ್ಟು ಜನರ ಸ್ಥಿತಿ ಗಂಭೀರ ವಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸಾವನ್ನಪ್ಪಿದವರನ್ನು ಫಯಾಜ್ ಜಮಖಂಡಿ (45 ), ವಾಸೀಂ ಮುಡಗೇರಿ (35 ), ಇಜಾಜ್ ಮುಲ್ಲಾ (20), ಸಾದೀಕ್ ಭಾಷ್ (30 ), ಗುಲಾಮ್ ಹುಸೇನ್ ಜವಳಿ (40), ಇಮ್ತಿಯಾಜ್ ಮುಳಕೇರಿ (36 ), ಅಲ್ಪಾಜ್ ಜಾಫರ್ ಮಂಡಕ್ಕಿ (25), ಜೀಲಾನಿ ಅಬ್ದುಲ್ ಜಖಾತಿ (25), ಅಸ್ಲಂ ಬಾಬುಲಿ ಬೆಣ್ಣಿ (24), ಜಲಾಲ್ ತಾರಾ (30) ಎಂದು ಗುರ್ತಿಸಲಾಗಿದೆ.
ಘಟನೆ ವೇಳೆ ಲಾರಿಯಲ್ಲಿ ಒಟ್ಟು 28 ಮಂದಿ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ. ಲಾರಿಯು ಸವಣೂರಿನಿಂದ ಕುಮಟಾಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು, ಪರಿಶೀಲನೆ ನಡೆಸಿದ್ದು, ಗಾಯಾಳು ಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ದೇಹ ಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಸಂಬಂಧ ಹೇಳಿಕೆ ನೀಡಿರುವ ಉತ್ತರಕನ್ನಡ ಜಿಲ್ಲೆಯ ಎಸ್ಪಿ ನಾರಾಯಣ್ ಯಲ್ಲಾಪುರ ಅವರು, ದಟ್ಟ ಮಂಜು ಇದ್ದ ಕಾರಣ ಅಪಘಾತ ಸಂಭವಿಸಿದೆ. ಮಂಜು ಮುಸುಕಿದ್ದರಿಂದ ಎದುರಿಗೆ ಬರುತಿದ್ದ ವಾಹನಕ್ಕೆ ಸೈಡ್ ಕೊಡಲು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ೫೦ ಅಡಿ ಆಳದ ಹಳ್ಳಕ್ಕೆ ಉರುಳಿದೆ. ವಾಹನದಲ್ಲಿ ಹಣ್ಣು, ತರಕಾರಿಗಳಿತ್ತು, 28 ಜನ ಪ್ರಯಾಣಿಸುತಿದ್ದರು. ಲಾರಿ ಪಲ್ಟಿಯಾದ ಕಾರಣ ಜನರ ಮೇಲೆ ತರಕಾರಿ ಬಿದ್ದು ಉಸಿರುಗಟ್ಟಿ 9 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಅಪಘಾತವಾಗಿ 1 ಗಂಟೆ ನಂತರ ಮಾಹಿತಿ ದೊರೆತಿದೆ. ಅಲ್ಲಿಯವರೆಗೂ ಲಾರಿಯಲ್ಲಿ ಜನ ರಿರುವ ಬಗ್ಗೆ ಮಾಹಿತಿಯೇ ಇರಲಿಲ್ಲ. ಕ್ರೇನ್ ತಂದು ಲಾರಿ ಮೇಲೆತ್ತಿದಾಗ ಜನರಿರುವುದು ತಿಳಿದುಬಂದಿದೆ. ಆದರೆ, ಅಷ್ಟರಲ್ಲಿ 9 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದರು.
ತಕ್ಷಣ ಉಳಿದವರನ್ನ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಭೀರ ಗಾಯವಾದವರನ್ನ ಹುಬ್ಬಳ್ಳಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಒಟ್ಟು 10 ಜನ ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆಂದು ಮಾಹಿತಿ ನೀಡಿದ್ದಾರೆ.

Share This Article
";