ಭದ್ರಾವತಿ, ಅ.04 : ಕೊಲೆ ಆರೋಪಿಗಳಿಗೆ ಬುಧವಾರ ನಗರದ ನಾಲ್ಕನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ 10 ವರ್ಷ ಸೆರೆವಾಸ ಮತ್ತು ದಂಡ ವಿಧಿಸಿದೆ.ತಾಲೂಕಿನ ಗುಡಮಘಟ್ಟ ವಾಸಿ ಮಂಜಪ್ಪ 2018 ರ ಜ. 31 ರಂದು ತನಗೆ ಸೇರಿದ ಸವೆ ನಂಬರ್ 40/17 ರಲ್ಲಿ ಮೂರುಎಕರೆ ಹನ್ನೊಂದು ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಗುಡಮಘಟ್ಟದ ವಾಸಿಗಳಾದ ಚಿಕ್ಕಮಗಳೂರು ರಂಗಪ್ಪ, ಹನುಮಂತಪ್ಪ ಯಾನೆ ಪೂಜಾರ ಹನುಮಂತಪ್ಪ, ಖಾಲಿ ರಂಗಪ್ಪ ದಾವೆ ಹೂಡಿ ಕಿರುಕುಳ ನೀಡುತ್ತಾ ತೊಂದರೆ ಮಾಡುತ್ತಿದ್ದಾರೆ.
ಆದ್ದರಿಂದ ನಾನು ಕ್ರಿಮಿನಾಶಕ ಸೇವಿಸಿ ನನ್ನ ಅಡಿಕೆ ತೋಟದಲ್ಲಿರುವ ತಾಯಿಯ ಸಮಾಧಿಯ ಮೇಲೆ ಮಲಗಿಕೊಂಡಿದ್ದೇನೆ. ನನ್ನ ಸಾವಿಗೆ ಈ ಮೂವರು ಕಾರಣ ಎಂದು ಅವರ ಹೆಸರನ್ನು ಬರೆದಿಟ್ಟು ಮನೆಯವರಿಗೆ ಫೋನ್ ಮೂಲಕ ತಿಳಿಸಿದ್ದನು.ವಿಷಯ ತಿಳಿದ ಮನೆಯವರು ಕೂಡಲೇ ಸ್ಥಳಕ್ಕೆ ಹೋಗಿ ವಿಷ ಸೇವಿಸಿದ್ದ ಮಂಜಪ್ಪನನ್ನು ಶಿವಮೊಗ್ಗ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಫಲಕಾರಿಯಾಗದೆ ಅದೇ ದಿನ ನಿಧನ ಹೊಂದಿದ್ದನು.
ಈ ಕುರಿತಂತೆ ಹೊಳೆಹೊನ್ನೂರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ನಡೆಸಿ ನ್ಯಾಯಾಲಯಕ್ಕೆ ಮೂವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ನಾಲ್ಕನೆ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಪ್ರಕರಣದ ಸಾಕ್ಷ್ಯ ವಿಚಾರಣೆ ನಡೆಸಿ, ಉಭಯಪಕ್ಷಾಗಾರರ ವಾದ,ಪ್ರತಿವಾದವನ್ನು ಆಲಿಸಿ, ಆರೋಪಿಗಳ ಮೇಲಿನ ಆರೋಪ ಸಾಬೀತಾದ ಕಾರಣ ಮೂವರು ಆರೋಪಿಗಳಿಗೆ 10 ವರ್ಷ ಕಠಿಣ ಸೆರೆವಾಸ, ಹಾಗೂ 2 ಲಕ್ಷ ರೂ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ಪಿರ್ಯಾದುದಾರರಾದ ಪಾಲಾಕ್ಷಮ್ಮ ಅವರಿಗೆ 1.5 ಲಕ್ಷರೂ ಗಳನ್ನು ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಪಿ.ರತ್ನಮ್ಮ ವಾದಿಸಿದ್ದರು